
March 19, 2026
ಗಾಂಧಿನಗರ: ಗುಜರಾತ್ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿರುವ ಬೆನ್ನಲ್ಲೇ, ಬುಧವಾರ ಇಡೀ ಸಂಕೀರ್ಣಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಅಧಿವೇಶನ ಆರಂಭಕ್ಕೂ ಮುನ್ನವೇ ತೀವ್ರ ಆತಂಕ ಸೃಷ್ಟಿಯಾಗಿದೆ.
ಗುಜರಾತ್ ವಿಧಾನಸಭೆಯ ಕಲಾಪಗಳು ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿತ್ತು. ಆದರೆ, ಸರಿಯಾಗಿ 15 ನಿಮಿಷಗಳ ಮೊದಲು ಅಂದರೆ ಬೆಳಗ್ಗೆ 8:45ಕ್ಕೆ ವಿಧಾನಸಭೆಯ ಅಧಿಕೃತ ಇಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. “ವಿಧಾನಸಭಾ ಸಂಕೀರ್ಣದಲ್ಲಿ ಬಾಂಬ್ ಇರಿಸಲಾಗಿದೆ” ಎಂಬ ಈ ಮೇಲ್ ಬಂದ ಕೂಡಲೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ, ಕೂಡಲೇ ಕಾರ್ಯಪ್ರವೃತ್ತರಾದರು.
ಬೆದರಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಧಾನಸಭೆಯಲ್ಲಿದ್ದ ಎಲ್ಲಾ ಶಾಸಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೂಡಲೇ ಸಂಕೀರ್ಣದಿಂದ ಹೊರಕ್ಕೆ ಕಳುಹಿಸಲಾಯಿತು.
“ಇಮೇಲ್ ಬಂದ ತಕ್ಷಣ ನಾವು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಸದ್ಯ ಇಡೀ ಆವರಣವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದು, ಸ್ಫೋಟಕಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ,” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ವಂದಾ ತಿಳಿಸಿದ್ದಾರೆ.
ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳದೊಂದಿಗೆ ಪೊಲೀಸ್ ಅಧಿಕಾರಿಗಳು ವಿಧಾನಸಭೆಯ ಮೂಲೆ ಮೂಲೆಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲವಾದರೂ, ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
Share