ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಮಹಿಳೆಯೊಬ್ಬಳನ್ನ ಜೀವನ್ ಬಿಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಮೂಲದ ಚೈತ್ರಾ ಬಂಧಿತ ಆರೋಪಿ. ಕಳೆದ ಒಂದು ವರ್ಷದಿಂದ ಹಂತಹಂತವಾಗಿ ಕಳ್ಳತನ ಮಾಡಿದ್ದ ಮಹಿಳೆಯಿಂದ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 12.5 ಕೆ.ಜಿ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರ ಸರ್ಜನ್ ಒಬ್ಬರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಚೈತ್ರಾ ಮನೆ ಕೆಲಸ ಮಾಡಿಕೊಂಡಿದ್ದಳು. ಮಾಲೀಕರು ಮನೆಯ ಮಹಡಿಯ ಮೇಲಿದ್ದ ಕೊಠಡಿಯೊಂದರಲ್ಲಿ ಬೆಳ್ಳಿಯ ಪಾತ್ರೆ ಹಾಗೂ ಪೂಜಾ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದರು. ಆ ಸಾಮಗ್ರಿಗಳನ್ನು ಕೇವಲ ಹಬ್ಬದ ಸಂದರ್ಭಗಳಲ್ಲಿ ಮಾತ್ರ ಹೊರತೆಗೆಯಲಾಗುತ್ತಿತ್ತು. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ಚೈತ್ರಾ, ಮಾಲೀಕರಿಗೆ ತಿಳಿಯದಂತೆ ಮಹಡಿಯಲ್ಲಿದ್ದ ಬೆಳ್ಳಿ ಸಾಮಗ್ರಿಗಳನ್ನು ಒಂದೊಂದಾಗಿ ಕದಿಯಲು ಆರಂಭಿಸಿದ್ದಳು. ಕಳೆದ ಒಂದು ವರ್ಷದಿಂದ ಹಂತ ಹಂತವಾಗಿ ಒಟ್ಟು 12.5 ಕೆಜಿ ತೂಕದ ಬೆಳ್ಳಿ ಪಾತ್ರೆಗಳನ್ನು ಎಗರಿಸಿದ್ದಳು. ದೀಪಾವಳಿ ಹಬ್ಬಕ್ಕೂ ಕೆಲವು ದಿನಗಳ ಮೊದಲೇ ಚೈತ್ರಾ ಇದ್ದಕ್ಕಿದ್ದಂತೆ ಕೆಲಸ ಬಿಟ್ಟಿದ್ದಳು. ಹಬ್ಬದ ಪೂಜೆಗಾಗಿ ಮನೆಯವರು ಬೆಳ್ಳಿ ಪಾತ್ರೆಗಳಿದ್ದ ಚೀಲವನ್ನು ತೆರೆದಾಗ ಕಳ್ಳತನದ ಕೃತ್ಯ ಬಯಲಾಗಿತ್ತು. ತಕ್ಷಣ ಮಾಲೀಕರು ಜೀವನ್ ಭಿಮಾ ನಗರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಜೀವನ್ ಬಿಮಾ ನಗರ ಪೊಲೀಸರು ತನಿಖೆ ಕೈಗೊಂಡಾಗ, ಹಳೆಯ ಕೆಲಸದವರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಚೈತ್ರಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ. ಪತಿ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದುದರಿಂದ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಆದ್ದರಿಂದ ಬೆಳ್ಳಿ ಸಾಮಗ್ರಿಗಳನ್ನ ಕದ್ದು ಅಡವಿಟ್ಟು ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತಳಿಂದ ಸದ್ಯ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 12.5 ಕೆಜಿ ಬೆಳ್ಳಿ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Share