ನವದೆಹಲಿ: ನಿವೃತ್ತ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಅವರ ಆತ್ಮಚರಿತ್ರೆ ಪುಸ್ತಕ ‘ಫೋರ್ ಸ್ಟಾರ್ ಆಫ್ ಡೆಸ್ಟಿನಿ’ ಕುರಿತ ವಿವಾದ ಇನ್ನೂ ತಣಿದಿಲ್ಲ. ಪುಸ್ತಕ ಪ್ರಕಟವಾಗಿಲ್ಲ ಎಂದು ಅದರ ಪ್ರಕಾಶನದ ಹಕ್ಕು ಹೊಂದಿರುವ ಪೆಂಗ್ವಿನ್ ರಾಂಡಮ್ ಹೌಸ್ನ ಸ್ಪಷ್ಟನೆಯನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.
“ನನ್ನ ಪುಸ್ತಕ ಪ್ರಕಟವಾಗಿದೆ. ಓದಿರಿ ಎಂದು ಖುದ್ದು ನರವಾಣೆ ಅವರೇ ತಿಳಿಸಿದ್ದಾರೆ. ಆದರೆ, ಪುಸ್ತಕ ಪ್ರಕಟವಾಗಿಲ್ಲ ಎಂದು ಪೆಂಗ್ವಿನ್ ಸಂಸ್ಥೆ ಹೇಳುತ್ತಿದೆ. ಇಲ್ಲಿ ನಾವು ಯಾರನ್ನು ನಂಬಬೇಕು” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇಂದು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ, “ಪುಸ್ತಕ ಮಾರಾಟಕ್ಕೆ ಲಭ್ಯವಿದೆ ಎಂದು ನರವಾಣೆ ಅವರೇ ಪ್ರತಿಪಾದಿಸಿದ್ದಾರೆ. ಪುಸ್ತಕ ಪ್ರಕಟಿಸಿಲ್ಲ. ಮುದ್ರಣ ಅಥವಾ ಡಿಜಿಟಲ್ ಪ್ರತಿ ವಿತರಣೆಗೆ ಲಭ್ಯವಿಲ್ಲ” ಎಂದು ಪೆಂಗ್ವಿನ್ ಸಂಸ್ಥೆ ಹೇಳುತ್ತಿರುವುದು ಸುಳ್ಳು ಎಂದರು.
“2023 ರಲ್ಲಿ ನರವಾಣೆ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪುಸ್ತಕ ಪ್ರಕಟವಾದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ “ನಮಸ್ಕಾರ ಸ್ನೇಹಿತರೇ, ನನ್ನ ಪುಸ್ತಕ ಈಗ ಲಭ್ಯವಿದೆ. ಲಿಂಕ್ ಅನುಸರಿಸಿ. ಖುಷಿಯಿಂದ ಓದಿ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ, ನರವಾಣೆ ಅವರು ಹೇಳುತ್ತಿರುವುದು ಸುಳ್ಳೋ ಅಥವಾ ಪ್ರಕಾಶನ ಸಂಸ್ಥೆ ಹೇಳುತ್ತಿರುವುದು ಸುಳ್ಳೋ?. ಪ್ರಕಾಶಕರು ಪುಸ್ತಕ ಪ್ರಕಟಿಸಿಲ್ಲ ಎಂದು ಹೇಳುತ್ತಿದ್ದರೂ, ಅದು ಇ-ಕಾಮರ್ಸ್ ವೇದಿಕೆಯಾದ ಅಮೆಜಾನ್‌ನಲ್ಲಿ ಲಭ್ಯವಿದೆ” ಎಂದು ಹೇಳಿದರು.
Share