ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.
ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ.ಅಂಜಾರಿಯಾ ಪೀಠವು ವಿವಾದ ಇತ್ಯರ್ಥಪಡಿಸಲು ನ್ಯಾಯಮಂಡಳಿ ರಚಿಸುವುದು ಸೂಕ್ತ. ಆದೇಶ ಪ್ರಕಟವಾದ ಒಂದು ತಿಂಗಳೊಳಗೆ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಈ ಹಿಂದೆ ನಡೆದ ಅರ್ಜಿ ವಿಚಾರಣೆ ವೇಳೆ ಪೀಠ ಉಭಯ ರಾಜ್ಯಗಳು ತಮ್ಮ ವಾದಗಳನ್ನು ನ್ಯಾಯಮಂಡಳಿಯಲ್ಲಿ ಮಂಡಿಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು.
Share