ಬಿಡಿಸಿಸಿ ಚುನಾವಣೆ: ರಮೇಶ ಕತ್ತಿ ಸ್ಪರ್ಧಿಸಿರುವ ಹುಕ್ಕೇರಿ ಚುನಾವಣೆ ಮುಂದೂಡಿ ಹೈಕೋರ್ಟ್ ಆದೇಶ

Share
0Shares

ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ರಮೇಶ ಕತ್ತಿ ಸ್ಪರ್ಧಿಸಿರುವ ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿಸುವ ಮತಕ್ಷೇತ್ರದ ಚುನಾವಣೆಯನ್ನು ಹೈಕೋರ್ಟ್ ಧಾರವಾಡ ಪೀಠ ಮುಂದೂಡಿದೆ.

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ(ಡಿಸಿಸಿ) ಬ್ಯಾಂಕ್‌ 7 ನಿರ್ದೇಶಕ ಸ್ಥಾನಗಳಿಗೆ ಅ.19ರಂದು ಮತದಾನ ನಿಗದಿಯಾಗಿತ್ತು. ಆದರೆ, ಡೆಲಿಗೇಷನ್‌ ಸಮಸ್ಯೆ ಮುಂದಿಟ್ಟುಕೊಂಡು ಹುಕ್ಕೇರಿ ತಾಲೂಕಿನ ಮದಿಹಳ್ಳಿ ಪಿಕೆಪಿಎಸ್‌ ನಿರ್ದೇಶಕರೊಬ್ಬರು ಕೋರ್ಟ್‌ ಮೊರೆ ಹೋದ ಹಿನ್ನೆಲೆಯಲ್ಲಿ ಹುಕ್ಕೇರಿ ಕ್ಷೇತ್ರಕ್ಕೆ ನಡೆಯಬೇಕಿದ್ದ ಮತದಾನವನ್ನು ಮುಂದೂಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಕೋರಂ ಇಲ್ಲದೆಯೇ ಮದಿಹಳ್ಳಿ ಪಿಕೆಪಿಎಸ್‌ನಲ್ಲಿ ಡೆಲಿಗೇಷನ್‌ ಠರಾವು ಪಾಸ್‌ ಮಾಡಲಾಗಿದೆ ಎಂದು ನಿರ್ದೇಶಕ ಭೀಮಸೇನ ಬಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಮುಂದಿನ‌ ಆದೇಶದವರೆಗೆ ಚುನಾವಣೆ ಮುಂದೂಡಿ ಆದೇಶ ಹೊರಡಿಸಿದೆ ಎಂದು ಹೆಚ್ಚುವರಿ ಸರ್ಕಾರಿ ವಕೀಲ ರಮೇಶ ಚಿಗರಿ ಮಾಹಿತಿ ನೀಡಿದ್ದಾರೆ.

ಇದೇ ಮದಿಹಳ್ಳಿ ಪಿಕೆ‍‍ಪಿಎಸ್‌ನಲ್ಲಿ ಡೆಲಿಗೇಷನ್‌ ಠರಾವು ಪಾಸ್‌ ಮಾಡುವ ಸಂಬಂಧ ನಡೆದ ತಂಟೆಯಲ್ಲಿ, ಸಚಿವ ಸತೀಶ ಜಾರಕಿಹೊಳಿ ಮುಂದೆಯೇ ಮಹಿಳೆಯೊಬ್ಬರು ತಮ್ಮ ಪತಿ, ನಿರ್ದೇಶಕರ ಕಪಾಳಕ್ಕೆ ಹೊಡೆದಿದ್ದು‌ ದೊಡ್ಡ ಸುದ್ದಿ ಆಗಿತ್ತು.

ಬಿಡಿಸಿಸಿ ಬ್ಯಾಂಕ್‌ ಚುನಾವಣಾ ಕಾವು: ಬೆಳಗಾವಿಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣೆಯನ್ನು ಪ್ರಭಾವಿ ಜನಪ್ರತಿನಿಧಿಗಳು ಪ್ರತಿಷ್ಠೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಸಹಕಾರಿ ಬ್ಯಾಂಕ್ ಚುನಾವಣೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com
error: Content is protected !!
× How can I help you?
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94488 74282