ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶವನ್ನು ರವಾನಿಸಿದ ಆರೋಪದಲ್ಲಿ ಇಬ್ಬರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ತಾಳಿಪಾಡಿ ಗುತ್ತಕಾಡು ಶಾಂತಿನಗರ ನಿವಾಸಿಗಳಾದ ಮೊಹಮ್ಮದ್ ಅನ್ವರ್ (44 ) ಮತ್ತು ತಾಯಿರ್ ನಕಾಶ್ (42) ಬಂಧಿತ ಆರೋಪಿಗಳು.
ಆರೋಪಿಗಳು ಅ.15ರಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ್ದಾರೆ. ಈ ಸಂದೇಶದಲ್ಲಿ ‘ಒಂದು ಗ್ಯಾಂಗ್ ಇದೆ. ಯಾರೂ ನಿರ್ಲಕ್ಷ್ಯ ಮಾಡಬೇಡಿ. ಬಜಪೆ, ಸುರತ್ಕಲ್ ಅಂತಲ್ಲ, ಅವರ ಗ್ಯಾಂಗ್ ಇರುವುದು ಭಟ್ಟಕೋಡಿಯಲ್ಲಿ. ಬಜಪೆ, ಸುರತ್ಕಲ್‌ನ ಜನರು ಮಾತ್ರವಲ್ಲ ಕಿನ್ನಿಗೋಳಿಯವರು ಕ್ಯಾರ್‌ಫುಲ್ ಆಗಿರಬೇಕು ಇತ್ಯಾದಿಯಾಗಿ ಸಂದೇಶ ರವಾನಿಸಿದ್ದಾರೆ. ಸಮಾಜದಲ್ಲಿ ಕೋಮುಗಲಭೆ ಆಗುವಂತಹ ಈ ಸಂದೇಶವನ್ನು ವಾಟ್ಸ್‌ಆ್ಯಪ್ ಮೂಲಕ ರವಾನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಗಾಗಿ ಇಂತಹ ಆಂತಕಕಾರಿ ಸಂದೇಶಗಳ ಬಗ್ಗೆ ಸಾರ್ವಜನಿಕರು ಗಮನ ಕೊಡಬಾರದು ಮತ್ತು ಇಂತಹ ಸಂದೇಶಗಳನ್ನು ಶೇರ್ ಮಾಡದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
