ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಎನ್‌ಡಿಎ ಭಾನುವಾರ ಅಂತಿಮಗೊಳಿಸಿದೆ. ಸೀಟು ಹಂಚಿಕೆ ಸೂತ್ರದಂತೆ ಬಿಹಾರದ ಒಟ್ಟು 243 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಇನ್ನುಳಿದ ಕ್ಷೇತ್ರಗಳನ್ನು ಎನ್‌ಡಿಎ ಮೈತ್ರಿ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.
ಸೀಟು ಹಂಚಿಕೆ ಕುರಿತು ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಕುಮಾರ್ ಝಾ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಸೀಟು ಹಂಚಿಕೆ ಸೂತ್ರದಡಿ ಬಿಜೆಪಿ ಮತ್ತು ಜೆಡಿಯು ತಲಾ 101 ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು 29 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇನ್ನು ಜಿತನ್ ರಾಮ್ ಮಾಂಝಿ ಅವರ ಹೆಚ್‌ಎಎಂ ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷಕ್ಕೆ ತಲಾ ಆರು ಸ್ಥಾನಗಳನ್ನು ನೀಡಲಾಗಿದೆ’ ಎಂದು ಸಂಜಯ್ ಕುಮಾರ್ ಝಾ ತಿಳಿಸಿದ್ದಾರೆ.
ಎನ್‌ಡಿಎ ಪಕ್ಷಗಳ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಈ ನಿರ್ಧಾರವನ್ನು ಸಂತೋಷದಿಂದ ಸ್ವಾಗತಿಸುತ್ತಾರೆ. ಜೊತೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬಹುಮತದೊಂದಿಗೆ ಮರು ಆಯ್ಕೆ ಮಾಡಲು ದೃಢನಿಶ್ಚಯ ಮತ್ತು ಒಗ್ಗಟ್ಟಿನಿಂದ ಇರುವುದಾಗಿ ಹೇಳಿರುವ ಸಂಜಯ್ ಝಾ, ತಮ್ಮ ಎಕ್ಸ್ ಖಾತೆಯಲ್ಲಿ “ಬಿಹಾರ ಸಿದ್ಧವಾಗಿದೆ, ಮತ್ತೊಮ್ಮೆ ಎನ್‌ಡಿಎ ಸರ್ಕಾರ” ಎಂದು ಪೋಸ್ಟ್ ಮಾಡಿದ್ದಾರೆ.
ಬಿಹಾರದ ಎನ್‌ಡಿಎ ಮಿತ್ರಪಕ್ಷಗಳು ಸೀಟು ಹಂಚಿಕೆಯನ್ನು ಸ್ವಾಗತಿಸಿವೆ ಮತ್ತು ಮಾತುಕತೆಗಳು ಸೌಹಾರ್ದಯುತವಾಗಿ ನಡೆದಿವೆ ಎಂದು ಬಿಹಾರ ಚುನಾವಣಾ ಉಸ್ತುವಾರಿ ಮತ್ತು ಕಳೆದ ವರ್ಷ ಹರಿಯಾಣದಲ್ಲಿ ಬಿಜೆಪಿಗೆ ಸತತ ಮೂರನೇ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ
