ವಿಶ್ವಸಂಸ್ಥೆ: ಇಸ್ರೇಲ್-ಇರಾನ್ ನಡುವಿನ ಸಂಘರ್ಷದಲ್ಲಿ ಇರಾನ್ ರಾಷ್ಟ್ರದ 3 ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿ ಇಸ್ರೇಲ್’ಗೆ ಬೆಂಬಲ ವ್ಯಕ್ತಪಡಿಸಿರುವ ಅಮೆರಿಕಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಶಪಥ ಮಾಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಅಮೆರಿಕಕ್ಕೆ ತಕ್ಕ ತಿರುಗೇಟು ನೀಡುವುದಾಗಿ ಇರಾನ್ ಹೇಳಿಕೊಂಡಿದೆ.
ದಾಳಿಯ ‘ಸಮಯ, ಸ್ವರೂಪ, ಪ್ರಮಾಣ’ ನಾವು ನಿರ್ಧರಿಸುತ್ತೇವೆಂದು ವಿಶ್ವಸಂಸ್ಥೆಯಲ್ಲಿ ಇರಾನ್ನ ರಾಯಭಾರಿ ಅಮೀರ್ ಸಯೀದ್ ಇರಾವಿನಿ ಅವರು ಹೇಳಿದ್ದಾರೆ.
ರಾಜತಾಂತ್ರಿಕತೆಯನ್ನು ನಾಶಮಾಡಲು ಅಮೆರಿಕ ನಿರ್ಧರಿಸಿದೆ. ಈಗ ರಾಜತಾಂತ್ರಿಕತೆಯ ಸಮಯ ಮೀರಿದೆ. ಇರಾನ್ಗೆ ತನ್ನನ್ನು ರಕ್ಷಿಸಿಕೊಳ್ಳುವ ಎಲ್ಲಾ ಹಕ್ಕಿದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಇರಾನ್ನ ಫೋರ್ಡೊ, ನಟಾನ್ಜ್ ಹಾಗೂ ಎಸ್ಫಹಾನ್ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು. ಆ ಮೂಲಕ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಲ್ಲಿ ಅಮೆರಿಕ ಅಧಿಕೃತವಾಗಿ ಮಧ್ಯಪ್ರವೇಶ ಮಾಡಿತ್ತು.
