ಮಂಗಳೂರು: ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ನೆಲೆಸಿದ್ದ 8 ಮಂದಿ ಬಾಂಗ್ಲಾದೇಶಿಗರ ಬಂಧನ

Share
0Shares

ಮಂಗಳೂರು: ಸುರತ್ಕಲ್‌ನಲ್ಲಿ ಅಕ್ರಮವಾಗಿ ನುಸುಳಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಇಲ್ಲೇ ನೆಲೆಸಿದ್ದ 8 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲವು ಬಾಂಗ್ಲಾದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 9, 2026 ರಂದು ಸುರತ್ಕಲ್ ಪೊಲೀಸರು ನಿರ್ಮಾಣ ಹಂತದ ಕಟ್ಟಡದ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 54 ಮಂದಿ ಕಟ್ಟಡ ಕಾರ್ಮಿಕರ ದಾಖಲಾತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸವಿದ್ದ 8 ಮಂದಿ ಬಾಂಗ್ಲಾದೇಶದ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ.

ಬಂಧಿತ ಆರೋಪಿಗಳ ವಿವರ:ಬಂಧಿತರನ್ನು ಬಾಂಗ್ಲಾದೇಶದ ರಾಜ್‌ಶಾಹಿ ವಿಭಾಗದ ಗೋದಾಗರಿ ತಾಲೂಕಿನ ನಿವಾಸಿಗಳೆಂದು ಗುರುತಿಸಲಾಗಿದೆ. ಎಂಡಿ ಮುಕ್ತಾರ್ ಅಲಿ (36), ಎಂಡಿ ರಾಕಿಬುರ್ ಹುಸೇನ್ (44), ಎಂಡಿ ಅಜಾರುಲ್ ಇಸ್ಲಾಂ (36), ಎಂಡಿ ಜಾಹಿದ್ ಹುಸೇನ್ (18), ಎಂಡಿ ಬೆಲಾಲ್ ಹುಸೇನ್ (36), ಎಂಡಿ ಹಸೀಬುಲ್ ಹಸನ್ ಶಾಂಟೊ (37) ಮತ್ತು ಎಂಡಿ ಸಮೀವುಲ್ ಹಸನ್ (23), ಎಂಡಿ ಸೈಬುರ್ ರೆಹಮಾನ್ ಎಂದು ಹೆಸರಿಸಲಾಗಿದೆ.

ನಕಲಿ ಆಧಾರ್ ಕಾರ್ಡ್ ಸೃಷ್ಟಿ:ವಿಚಾರಣೆಯ ವೇಳೆ ಆರೋಪಿಗಳು ಸ್ಫೋಟಕ ಮಾಹಿತಿಗಳನ್ನು ಬಾಯಿಬಿಟ್ಟಿದ್ದಾರೆ. ಇವರೆಲ್ಲರೂ ಸುಮಾರು 3 ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದ ಗಡಿ ದಾಟಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತದೊಳಗೆ ನುಸುಳಿದ್ದರು. ಬಳಿಕ ಮುರ್ಷಿದಾಬಾದ್‌ನ ಪಶ್ಚಿಮ ಬಂಗಾಳದ ವಿಳಾಸವಿರುವ ಇತರರ ಆಧಾರ್ ಕಾರ್ಡ್‌ಗಳಿಗೆ ಈ ಬಾಂಗ್ಲಾದೇಶಿ ನಿವಾಸಿಗಳ ಭಾವಚಿತ್ರವನ್ನು ಅಂಟಿಸಿ, ಕಲರ್ ಜೆರಾಕ್ಸ್ ಮಾಡುವ ಮೂಲಕ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದರು. ಈ ನಕಲಿ ದಾಖಲೆಗಳನ್ನು ತೋರಿಸಿ ಕಳೆದ 2 ತಿಂಗಳಿನಿಂದ ಸುರತ್ಕಲ್‌ನ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಾಗಿ ತೊಡಗಿಸಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

Share
0Shares

Leave a Reply

Your email address will not be published. Required fields are marked *

WP2Social Auto Publish Powered By : XYZScripts.com